ಹುಳಿಯಾರು: "ಹೈನುಗಾರಿಕೆಯಲ್ಲಿ ವರ್ಗೀಸ್ ಕುರಿಯನ್‌ವರ ಪಾತ್ರವನ್ನು ನಾವೆಲ್ಲರೂ ಇಂದಿಗೂ ನೆನೆಯಬೇಕು. ಪ್ರಸ್ತುತ ಭಾರತದ ಜನಸಂಖ್ಯೆಗೆ ಎಲ್ಲರಿಗೂ ಹಾಲಿನ ಉತ್ಪನ್ನಗಳನ್ನು ಒದಗಿಸುವ ಅಗತ್ಯತೆಯಿದೆ. ಹಾಗಾಗಿ ಹೈನುಗಾರಿಕೆಯನ್ನು ಅಭಿವೃದ್ಧಿಗೊಳಿಸಬೇಕಾಗಿದೆ" ಎಂದು ಚಿಕ್ಕನಾಯಕನಹಳ್ಳಿ ತಾಲ್ಲೂಕ್ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ|| ರೆ.ಮ.ನಾಗಭೂಷಣ್ ತಿಳಿಸಿದರು.
ಸಮೀಪದ ಬೆಳಗುಲಿ ಗ್ರಾಮದಲ್ಲಿ ಹುಳಿಯಾರಿನ ಬಿ.ಎಂ.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಆಯೋಜಿಸಲಾಗಿರುವ ರಾಷ್ಟ್ರೀಯ ಸೇವಾ ಯೋಜನೆ ಘಟಕ-1 ಮತ್ತು 2 ರ 2024-25 ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು "ಕರುಣ - ಕರುಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮ" ದ ಬಗ್ಗೆ ಮಾಹಿತಿ ನೀಡಿದ ಅವರು ಹಸುಗಳ ವಿವಿಧ ತಳಿಗಳನ್ನು ತಿಳಿಸುತ್ತಾ, "ಅವುಗಳಿಗೂ ಮನುಷ್ಯರಂತೆ ಪೌಷ್ಟಿಕಯುತವಾದ ಸಮತೋಲನ ಆಹಾರವನ್ನು ನೀಡಲು ಅವಶ್ಯಕತೆ ಇದೆ" ಎಂದರು.
ಪಶು ಸಂಗೋಪನೆಯನ್ನು ಮಾಡಿ ಯಶಸ್ವಿಯಾದವರ ಉದಾಹರಣೆಗಳನ್ನು ನೀಡಿದರು. ಮುಂದುವರಿದು, "ಯಾರಲ್ಲಿ ದುಡಿಮೆಯ ಆಸಕ್ತಿ ಇದೆಯೋ ಅವರು ಮಾತ್ರ ಜೀವನದಲ್ಲಿ ಬೆಳೆಯಲು ಸಾಧ್ಯ" ಎಂದರು. ಮೆಕ್ಕೆಜೋಳ, ಶೇಂಗಾ ಹಿಂಡಿ ಹಾಗೂ ವಿವಿಧ ಆಹಾರ ಉತ್ಪನ್ನಗಳನ್ನು ಯಾವ ಪ್ರಮಾಣದಲ್ಲಿ ಹಾಕಬೇಕೆಂದು ತಿಳಿಸಿದರು. ಅಲ್ಲದೆ, ಪಶು ಸಂಗೋಪನೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಸಿಗುವ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಡಾ|| ಸುಷ್ಮಾ ಎಲ್. ಬಿರಾದಾರ್ ಅಧ್ಯಕ್ಷತೆ ವಹಿಸಿದ್ದರು. ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಗಳಾದ ಎಸ್.ರಮೇಶ್ ಮತ್ತು ಎಸ್.ಲಕ್ಷ್ಮೀ , ಸಹಶೀಬಿರಾಧಿಕಾರಿಗಳಾದ ಎಂ.ಕೆ.ತಿಪ್ಪೇಸ್ವಾಮಿ, ಎನ್.ಬಿ.ಸುಮಯ್ಯ ಮತ್ತಿತರರು ಸೇರಿದಂತೆ ಗ್ರಾಮಸ್ಥರು ಮತ್ತು ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.